ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ
Share
ಯಕ್ಷಗಾನದ ಚೆಂಡೆ-ಮದ್ದಳೆವಾದಕರ ಗುಣ ಲಕ್ಷಣಗಳು

ಲೇಖಕರು :
ಪ್ರಭಾಕರ ಶಿಶಿಲ
ಮ೦ಗಳವಾರ, ಮಾರ್ಚ್ 8 , 2016

ಯಕ್ಷಗಾನದ ಚೆಂಡೆ ಮತ್ತು ಚೆಂಡೆವಾದಕ

ವೀರರಸ ಪೋಷಣೆಗೆ ಪೂರಕವಾದ ಮರದ ಉದ್ದನೆಯ ಕಳಸಿಗೆಯಿಂದ ಮಾಡಿದ, ಚರ್ಮದ ಮುಚ್ಚಿಗೆಯ ಮತ್ತು ಬಳ್ಳಿಗಳಿಂದ ಆವೃತ್ತವಾದ ಒಂದು ಲಯವಾದ್ಯವೇ ಚೆಂಡೆ. ಅದನ್ನು ಬಾರಿಸುವವನನ್ನು ಚೆಂಡೆವಾದಕ ಎಂದು ಕರೆಯಲಾಗುತ್ತದೆ. ಆದರೆ ಯಕ್ಷಗಾನದಲ್ಲಿ ಚೆಂಡೆ-ಮದ್ದಲೆವಾದಕನನ್ನು ಮದ್ದಳೆಗಾರ ಎಂದೇ ಗುರುತಿಸಲಾಗುತ್ತದೆ. ಯಕ್ಷಗಾನದಲ್ಲಿ ಚೆಂಡೆಗಿಂತಲೂ ಮದ್ದಳೆಗೆ ಪ್ರಾಶಸ್ತ್ಯ ಎಂಬುದನ್ನು ಇದು ಸೂಚಿಸುತ್ತದೆ.

ತೆಂಕುತಿಟ್ಟಿನ ಚೆಂಡೆ
ಬಯಲಾಟಗಳು ರಾತ್ರಿಯಿಡೀ ನಡೆಯುವ ಪ್ರದರ್ಶನಗಳು. ಪ್ರದರ್ಶನದುದ್ದಕ್ಕೂ ಬರುವ ಯುದ್ಧ, ಬೇಟೆ, ಒಡ್ಡೋಲಗ, ಪ್ರವೇಶ ಇತ್ಯಾದಿ ಸಂದರ್ಭಗಳಲ್ಲಿ ಚೆಂಡೆ ಬಳಕೆಯಾಗುತ್ತದೆ. ಚೆಂಡೆ ನಿದ್ದೆಯನ್ನು ಹೊಡೆದೋಡಿಸುವ, ನೃತ್ಯ ಗೊತ್ತಿಲ್ಲದವನನ್ನೂ ಕುಣಿಯಲು ಪ್ರಚೋದಿಸುವ ಒಂದು ಅದ್ಭುತ ಲಯವಾದ್ಯ.

ಚೆಂಡೆ ವಾದಕನ ಪಾತ್ರ

ಯಕ್ಷಗಾನದಲ್ಲಿ ಚೆಂಡೆವಾದಕನಿಗೆ ವಿಶಿಷ್ಟ ಸ್ಥಾನವಿದೆ. ಆತನ ಪಾತ್ರವನ್ನು ಹೀಗೆ ವಿವರಿಸಬಹುದು :

  • ಪಾತ್ರಗಳ ಪ್ರವೇಶ ಮತ್ತು ನಿರ್ಗಮನವನ್ನು ಪರಿಣಾಮಕಾರಿಯನ್ನಾಗಿಸುವುದು.
  • ಒಡ್ಡೋಲಗ, ಬೇಟೆ ಮತ್ತು ಯುದ್ಧ ಸಂದರ್ಭಗಳನ್ನು ಅರ್ಥಪೂರ್ಣವಾಗಿಸುವುದು.
  • ರಕ್ಕಸವೇಷ, ಹೆಣ್ಣು ಬಣ್ಣ, ವರಾಹ, ನರಸಿಂಹ ಇತ್ಯಾದಿ ವಿಶಿಷ್ಟ ವೇಷಗಳಿಗೆ ಭಯಾನಕತೆಯನ್ನು ಕಲ್ಪಿಸುವುದು.
  • ರುದ್ರ, ವೀರ ಮತ್ತು ಭೀಭತ್ಸ ರಸಾಭಿವ್ಯಕ್ತಿಗೆ ಸಹಕರಿಸುವುದು.
  • ಪ್ರೇಕಕರನ್ನು ಆಕರ್ಷಿಸುವುದು.
ಹಿಂದೆ ಪ್ರಚಾರ ಮಾಧ್ಯಮಗಳ ಭರಾಟೆ ಇರದಿದ್ದ ಕಾಲದಲ್ಲಿ ಚೆಂಡೆ ಪ್ರಚಾರ ಮಾಧ್ಯಮದಂತೆ ಕಾರ್ಯನಿರ್ವಹಿಸುತ್ತಿತ್ತು. ಯಕ್ಷಗಾನ ಬಯಲಾಟವಿರುವ ಊರಲ್ಲಿ ಎತ್ತರದ ಗುಡ್ಡವೇರಿ ಚೆಂಡೆ ಬಾರಿಸಿ ಜನರನ್ನು ಆಕರ್ಷಿಸಲಾಗುತ್ತಿತ್ತು. ಅದಕ್ಕೆ ‘ಕೇಳಿ ಬಡಿಯುವುದು’ ಎಂದು ಹೆಸರು. ಈಗ ಪ್ರಸಂಗದ ಆರಂಭಕ್ಕೆ ಮುನ್ನ ಸ್ವಲ್ಪ ಹೊತ್ತು ಚೆಂಡೆ ಬಡಿಯುವುದಿದೆ. ಅದನ್ನು ‘ಪೀಠಿಕೆ ಬಾರಿಸುವುದು’ ಎಂದು ಕರೆಯಲಾಗುತ್ತದೆ.

ಬಡಗು ತಿಟ್ಟಿನ ಚೆಂಡೆ
ತೆಂಕುತಿಟ್ಟಿನಲ್ಲಿ ಚೆಂಡೆವಾದಕ ಪ್ರವೇಶ ದ್ವಾರದಲ್ಲಿ, ಭಾಗವತನ ಎಡಪಾರ್ಶ್ವದಲ್ಲಿ ನಿಂತಿರುತ್ತಾನೆ. ಬಡಗು ತಿಟ್ಟಿನ ಚೆಂಡೆವಾದಕ ಭಾಗವತನ ಬಲ ಪಾರ್ಶ್ವದಲ್ಲಿ ಕುಳಿತಿರುತ್ತಾನೆ. ಚೆಂಡೆವಾದಕ ಬಹುತೇಕವಾಗಿ ನುರಿತ ಮದ್ದಳೆ ವಾದಕನೂ ಆಗಿರುತ್ತಾನೆ. ಅವನಿಗೆ ಪ್ರಸಂಗ ಜ್ಞಾನ, ರಂಗ ಮಾಹಿತಿ ಮತ್ತು ಕಲಾವಿದರ ಶಕ್ತಿ ಹಾಗೂ ದೌರ್ಬಲ್ಯಗಳ ಅರಿವಿದ್ದರೆ ಯಕ್ಷಗಾನ ಪ್ರದರ್ಶನ ಯಶಸ್ಸನ್ನು ಕಾಣುತ್ತದೆ.

ತೆಂಕು ತಿಟ್ಟು ಮತ್ತು ಬಡಗು ತಿಟ್ಟಿನ ಚೆಂಡೆಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿವೆ. ಚೆಂಡೆ ತಯಾರಿಸಲು ಬಹುತೇಕವಾಗಿ ಹಲಸು ಮತ್ತು ಕಾಚು ಮರಗಳನ್ನು ಬಳಸುತ್ತಾರೆ. ತೆಂಗಿನ ಮರದ ಕಾಂಡವನ್ನೂ ಬಳಸುವುದಿದೆ. ಚೆಂಡೆಯ ಮುಚ್ಚಿಗೆಗೆ ದನದ ಕರುವಿನ ಅಳ್ಳೆಯ ಚರ್ಮ ಬಳಸಲಾಗುತ್ತದೆ.

ಚೆಂಡೆಯ ಬಗ್ಗೆ ರಾಘವ ನಂಬಿಯಾರರ ವಿವರಣೆ ಹೀಗಿದೆ ; ‘ತೆಂಕು ತಿಟ್ಟಿನ ಚೆಂಡೆಯ ಕಳಸಿಗೆ ಉದ್ದ ಹದಿನೇಳುವರೆ ಅಡಿ. ಎರಡೂ ಮುಖಗಳ ಹೊರವ್ಯಾಸ ಒಂಬತ್ತೂವರೆ ಅಡಿ. ಈ ಕಳಸಿಗೆ ಬಿಳಿ ನಾಲ್ಕು ಶ್ರುತಿಗೆ ಉತ್ತಮವಾಗಿ ಒದಗುತ್ತದೆ. ಬಾಯ ಹೊರವ್ಯಾಸ ಒಂಬತ್ತು ಮುಕ್ಕಾಲು ಅಡಿ ಇದ್ದರೆ ಕಪ್ಪು ಮೂರು, ಬಿಳಿ ಐದು ಶ್ರುತಿಗಳಿಗೆ ಒದಗುತ್ತದೆ. ಚೆಂಡೆ ಒಂದು ಮುಖದಲ್ಲಿ ಮಾತ್ರ ನಾದ ನೀಡುವ ವಾದ್ಯ. ಇನ್ನೊಂದು ಮುಖ ನಾದ ಎಬ್ಬಿಸಿಕೊಡಲು ಆಧಾರ ನೀಡುತ್ತದೆ ಅಷ್ಟೆ. ಮೇಲೆ ನಿಲ್ಲುವ ಮುಖ ಬಾರಿಸಲು ಇರುವಂಥದ್ದು. ಕೆಳಗಿನ ಮುಚ್ಚಿಗೆಗೆ ಹೊಡೆದರೆ ಬೆನ್ನಿಗೆ ಹೊಡೆದಂತೆ ದಬ್‌, ದಬ್‌ ಸದ್ದು ಬರುತ್ತದೆ. ತೆಯ್ಯಂ ಆರಾಧನೆ ಹಾಗೂ ಕೇರಳದ ದೇವಸ್ಥಾನಗಳು ಪೂಜೆ ವೇಳೆ ಬಳಸುವ ಚೆಂಡೆಗೆ ಒತ್ತು ನೀಡಲು ಕೆಳ ಮುಚ್ಚಿಗೆಗೆ ಬಡಿಯುವುದುಂಟು. [ ಹಿಮ್ಮೇಳ, ಪುಟ 156]

ಬಡಗು ತಿಟ್ಟಿನ ಚೆಂಡೆಯ ಎತ್ತರ ಹದಿನೇಳು ಮುಕ್ಕಾಲು ಇಂಚು. ಮುಚ್ಚಿಗೆಯ ಹೊರವ್ಯಾಸ ಎಂಟೂಕಾಲು ಇಂಚು. ಹಿಂದೆ ಬಡಗು ತಿಟ್ಟಿನಲ್ಲಿ ಚೆಂಡೆಗೆಂದೇ ಪ್ರತ್ಯೇಕ ವ್ಯಕ್ತಿ ಇರಲಿಲ್ಲ. ರಾಘವ ನಂಬಿಯಾರರು ದಾಖಲಿಸುವಂತೆ ‘ಚೆಂಡೆಯನ್ನು ತೆಂಕುತಿಟ್ಟಿನಲ್ಲಿ ಮದ್ದಳೆಗಾರ ಬಾರಿಸುವುದಾದರೆ, ಬಡಗು ತಿಟ್ಟಿನಲ್ಲಿ ಮದ್ದಳೆಗಾರ ಚೆಂಡೆ ಬಾರಿಸಲಾರ. ಹಾಸ್ಯಗಾರ ಮತ್ತು ಸಖೀ ವೇಷದವರು ಚೆಂಡೆ ಬಾರಿಸಬೇಕು. ಚೆಂಡೆ ಬಾರಿಸಲು ಗೊತ್ತಿಲ್ಲ ವಾದರೆ ಸಖಿ ವೇಷವಾಗಿ ಮೇಳಕ್ಕೆ ಸೇರ್ಪಡೆ ಆಗುತ್ತಿರಲಿಲ್ಲ. ಹಾಸ್ಯಗಾರ ಕುಣಿಯ ಬೇಕಾದಾಗ ಸಖೀ ವೇಷದವನೂ, ಹಾಸ್ಯಗಾರನ ವೇಷ ಇಲ್ಲದಿರುವಾಗ ಹಾಸ್ಯಗಾರನೂ ಚೆಂಡೆ ಬಾರಿಸುವುದು ಪದ್ಧತಿ. ಕೋಡಂಗಿ ಸಹಿತ ಶಿಕ್ಷಾರ್ಥಿ ಸಖಿ ವೇಷದವರು ಕೂಡದಿ ಕಲಾವಿದರಿಗೆ ಚೆಂಡೆ ಸಹಿತ ಎಲ್ಲಕ್ಕೂ ಮೇಳದಲ್ಲಿ ಹಾಸ್ಯಗಾರನೇ ಗುರು. ಹಾಸ್ಯಗಾರ ಮೇಳದ ಸರ್ವ ಅಂಗಗಳ ನಿಷ್ಣಾತ ಎಂದು ಅರ್ಥ.[ ಅದೇ ಪುಟ 158]

ನಂಬಿಯಾರರ ಪ್ರಕಾರ ಬಡಗು ತಿಟ್ಟಿನಲ್ಲಿ ಚೆಂಡೆಗೆ ಮಹತ್ವ ಬಂದದ್ದು 1965ರ ಬಳಿಕ ಕೆಮ್ಮಣ್ಣು ಆನಂದರಾಯರಿಂದಾಗಿ. ಅವರು ಚೆಂಡೆ ವಾದನಕ್ಕೆ ಇಂಪು ಮತ್ತು ಲಾಲಿತ್ಯವನ್ನು ತಂದುಕೊಟ್ಟ ಬಳಿಕ ಹಿಂದೆ ಒಡ್ಡೋಲಗ, ಬೇಟೆ, ಯುದ್ಧ, ಪ್ರಯಾಣಗಳಿಗೆ ಮಾತ್ರ ಬಳಕೆಯಾಗುತ್ತಿದ್ದ ಚೆಂಡೆ, ಜಲಕೇಳಿ, ಪ್ರಣಯ, ಹಾಸ್ಯ, ಶೃಂಗಾರ ಇತ್ಯಾದಿ ರಸಗಳಿಗೂ ಬಳಕೆಯಾಗತೊಡಗಿತು. ತೆಂಕುತಿಟ್ಟಿನಿಂದಾಗಿ ಬಡಗಿನಲ್ಲೂ ಚೆಂಡೆ ವಾದನಕ್ಕೆ ಮಹತ್ವ ಬಂತು. ಬಡಗು ತಿಟ್ಟಿನಿಂದಾಗಿ ತೆಂಕಿನಲ್ಲೂ ಚೆಂಡೆಯನ್ನು ಸೌಮ್ಮ ರಸಗಳಿಗೂ ಬಳಸುವ ಪರಿಪಾಠ ಆರಂಭವಾಯಿತು.

ತೆಂಕು ಮತ್ತು ಬಡಗಿನಲ್ಲಿ ಚೆಂಡೆ ವಾದಕರು.
ತೆಂಕು ಮತ್ತು ಬಡಗಿನಲ್ಲಿ ಚೆಂಡೆ ಬಾರಿಸಲು ಬಳಸುವ ಕೋಲುಗಳು ಒಂದೇ ತೆರನಾಗಿಲ್ಲ. ತೆಂಕುತಿಟ್ಟಿನಲ್ಲಿ ಬಲಗೈ ಕೋಲು ಸುಮಾರು ಹದಿಮೂರು ಇಂಚು ಉದ್ದದ ಖಡ್ಗದಂತೆ ಬಾಗಿದ ಆಕೃತಿಯಲ್ಲಿ ಇರುತ್ತದೆ. ಇದರ ಹಿಡಿಕೆಯ ವ್ಯಾಸ ಒಂದು ಇಂಚಿನಷ್ಟು ಇರುತ್ತದೆ. ಉರುಟಾಗಿರುವ ಈ ಕೋಲಿನ ತುದಿಯ ವ್ಯಾಸ ಮೂರರಿಂದ ನಾಲ್ಕು ನೂಲುಗಳಷ್ಟು ಇರುತ್ತದೆ. ಎಡಗೈ ಕೋಲಿನ ಉದ್ದ ಒಂಬತ್ತು ಇಂಚುಗಳಷ್ಟು ಇರುತ್ತದೆ.

ಎಡಕೋಲಿನ ತುದಿ ಬಲಗೋಲಿನ ತುದಿಯಷ್ಟೇ ವ್ಯಾಸ ಹೊಂದಿರುತ್ತದೆ. ಎಡಗೋಲಿನ ಹಿಡಿಯ ವ್ಯಾಸ ಸುಮಾರು ಮುಕ್ಕಾಲು ಇಂಚು. ಎರಡೂ ಕೋಲುಗಳ ತುದಿ ಒಂದೇ ಆಕಾರಗಾತ್ರಗಳಲ್ಲಿ ಇರುತ್ತವೆ.[ ಹಿಮ್ಮೇಳ, ಪುಟ 162]

ತೆಂಕುತಿಟ್ಟಿನ ಚೆಂಡೆಕೋಲನ್ನು ಅಬ್ರಂಗಾಯಿಮರದ ಕೊಂಬೆ ಅಥವಾ ಬೇರಿನಿಂದ ಇಲ್ಲವೇ ದಾಸವಾಳದ ಗೆಲ್ಲಿನಿಂದ ತಯಾರಿಸುತ್ತಾರೆ. ಚೆಂಡೆ ಕೋಲಿನ ತುದಿಗೆ ಗಾಜಿನ ಚೂರನ್ನು ಕುಳ್ಳಿರಿಸಿದರೆ ವಿದ್ಯುತ್ತಿನ ಬೆಳಕಿಗೆ ಕಿಡಿಹಾರಿದ ಅನುಭವವಾಗುತ್ತದೆ.

‘ಸುಮಾರು ಹತ್ತರಿಂದ ಹನ್ನೊಂದುವರೆ ಇಂಚು ಉದ್ದದ, ತಲೆ ದಪ್ಪಗಿರುವ ನಾಗರಬೆತ್ತದ ಕೋಲುಗಳಿಂದ ಚೆಂಡೆಯನ್ನು ಬಾರಿಸುವುದು ಬಡಗು ತಿಟ್ಟಿನ ಪದ್ಧತಿ. ಕೋಲುಗಳನ್ನು ಕಿಸ್ಗಾರ ಕೇಪುಳದಿ ಗಿಡದ ದಪ್ಪಗಿನ ಗೆಲ್ಲುಗಳಿಂದಲೂ ಮಾಡುವುದುಂಟು. ಎರಡು ಕೋಲುಗಳದೂ ಒಂದೇ ಪ್ರಮಾಣದ ಗಾತ್ರ ಮತ್ತು ಆಕಾರ. ಕೋಲಿನ ದಪ್ಪಗಿನ ತಲೆಯಿಂದ ಚೆಂಡೆಯನ್ನು ಬಾರಿಸುತ್ತಾರೆ. ಸುಮಾರು ಅರುವತ್ತು ಡಿಗ್ರಿಯಲ್ಲಿ ಒಂದಕ್ಕೊಂದು ತಾಗದೆ ಕೋಲುಗಳು ಚೆಂಡೆಯ ಮೇಲೆ ಕುಣಿಯುತ್ತವೆ. ಕೋಲಿನ ಬಾರಿಸುವ ತಲೆಯಲ್ಲಿ ತೆಂಕುತಿಟ್ಟಿನ ಕೋಲುಗಳಿಗೆ ಮಾಡುವಂತೆ ಕುಳಿ ತೋಡಿ ಅದರಲ್ಲಿ ಕನ್ನಡಿ ಚೂರನ್ನು ಅಂಟಿಸಿ ಅಂದ ಬರಿಸುವ ಕುಶಲತೆಯನ್ನು ಬಡಗು ತಿಟ್ಟಿನ ಚೆಂಡೆ ವಾದಕರೂ ಮಾಡುತ್ತಾರೆ.[ ಹಿಮ್ಮೇಳ, ಪುಟ 163]

ಯಕ್ಷಗಾನದ ಮದ್ದಳೆ ಮತ್ತು ಮದ್ದಳೆಗಾರ

ಮದ್ದಳೆಯು ಚೆಂಡೆಯಂತೆ ಚರ್ಮವನ್ನು ಬಿಗಿದು ತಯಾರಿಸಿದ ಒಂದು ಲಯವಾದ್ಯ. ಮೂಡಲಪಾಯ ಯಕ್ಷಗಾನದಲ್ಲಿ ಚೆಂಡೆ ಇಲ್ಲ. ಆದರೆ ಮದ್ದಲೆ ಮೂಡಲಪಾಯ, ದೊಡ್ಡಾಟ, ಕಥಕ್ಕಳಿ, ಬಡಗು ತಿಟ್ಟು, ತೆಂಕುತಿಟ್ಟುಹೀಗೆ ಬಹುತೇಕ ಎಲ್ಲಾ ಕಲಾ ಪ್ರಕಾರಗಳಲ್ಲಿ ಬಳಕೆಯಲ್ಲಿದೆ. ಮದ್ದಳೆಯಿಲ್ಲದೆ ಯಕ್ಷಗಾನ ಪ್ರದರ್ಶನವಿಲ್ಲ. ಮದ್ದಳೆಯ ಬಲ ಭಾಗದ ‘ಛಾಪು’ ಹೆಸರಿನ ನಾದವು ಭಾಗವತನಿಗೆ ಶ್ರುತಿಯಂತೆ ಸಹಾಯಕವಾಗಿದೆ.

ತೆಂಕು ತಿಟ್ಟಿನ ಮದ್ದಳೆ
ಮದ್ದಳೆಯು ನವರಸಗಳಲ್ಲೂ ಬಳಕೆಯಾಗುವ ಹಿಮ್ಮೇಳ ಸಾಧನವಾಗಿದೆ. ವಿತಾಲದ ಪದ್ಯಗಳನ್ನು [ಉದಾ : ಭಾಮಿನಿ, ವಾರ್ಧಿಕ್ಯ, ಕಂದ, ದ್ವಿಪದಿ ಇತ್ಯಾದಿ] ಹೇಳುವಾಗ ಮಧ್ಯೆ ಮಧ್ಯೆಮದ್ದಳೆಯ ‘ಛಾಪು’ ಬೀಳಬೇಕೆಂಬ ಅಲಿಖಿತ ನಿಯಮವಿದೆ. ಮದ್ದಳೆಯ ನಡೆಗಳು ಶೃಂಗಾರ ರಸವನ್ನು ಅತ್ಯಂತ ಪರಿಣಾಮಕಾರಿಯನ್ನಾಗಿಸುತ್ತವೆ. ಸ್ತ್ರೀ ಪಾತ್ರಧಾರಿಯ ಯಶಸ್ಸು ಮದ್ದಳೆ ವಾದನ ವೈವಿಧ್ಯದಲ್ಲಿರುತ್ತದೆ.

ಮದ್ದಳೆಯ ಆಕೃತಿ ಹೇಗಿರಬೇಕೆಂದು ಸಭಾಲಕ್ಷಣ ಹೇಳುತ್ತದೆ :

ಮೃದಂಗೋ ರೂಕಕಾಂಗಶ್ಚ | ವರ್ತಲಾಕಾರ ಉನ್ನತಂ||
ಸೂರ್ಯಚಂದ್ರಾಕೃತೇ ಚರ್ಮ |ದ್ವಿಭಾಗೇ ಮಧ್ಯಕೇ ದೃಶಾ||
ಪುರುಷಾರ್ಧ ಪ್ರಮಾಣೇನ| ಕರ್ಣಕುಂಡಲ ಶೋಭಿತಃ||
ಮಣಿ ಹಸ್ತೇ ಸುವಿಸ್ತೀರ್ಣಃ| ಬತ್ತೀಸಾಲಯ ರಂಜಿತಃ ||
[ಸಭಾ ಲಕ್ಷಣ, ಪಾವಂಜೆ ಪ್ರತಿ, 1980, ಪುಟ 12]

ಮದ್ದಳೆಯ ಲಕ್ಷಣಗಳು

ಸಭಾಲಕ್ಷಣದ ಇವೆರಡು ಶ್ಲೋಕಗಳ ಆಧಾರದಲ್ಲಿ ಮದ್ದಳೆಯ ಲಕ್ಷಣಗಳನ್ನು ಹೀಗೆ ಪ್ರಸ್ತುತಪಡಿಸಬಹುದು.

  • ಅದು ಗಡುಸಾದ ರೂಕ್ಕದ ಅಂಗವುಳ್ಳದ್ದು.
  • ಅದರ ವರ್ತುಲಾಕಾರದ ನಡುಭಾಗ ಉನ್ನತವಾಗಿದೆ.
  • ಅದರ ಎರಡು ಮುಖಗಳು ಸೂರ್ಯ ಚಂದ್ರರ ಹಾಗೆ ವೃತ್ತಾಕಾರದಲ್ಲಿವೆ.
  • ಅದು ಪುರುಷಾರ್ಧ ಪ್ರಮಾಣದ್ದಾಗಿದೆ.
  • ಎರಡೂವರೆ ಅಡಿ ಮುಚ್ಚಿಗೆಯ ಚರ್ಮಗಳಲ್ಲಿ 32 ಮನೆಗಳಿವೆ. ಬತ್ತೀ ಸಾಲಯ.
  • ಮದ್ದಳೆ ನಾದ ಹೊರಡಿಸಲು ಕರ್ಣ ಎಂಬ ಮಿಶ್ರಣವನ್ನು ಮುಚ್ಚಿಗೆಯ ಮಧ್ಯ ದಲ್ಲಿ ಹಾಕಲಾಗುತ್ತದೆ.
  • ಮದ್ದಳೆಯ ಅಂಚುಗಳ ಚರ್ಮದ ದಾರದ ಉಗುರಗಳಲ್ಲಿ ಕುಂಡಲದಂತಹ ಮಣಿಗಳಿರುತ್ತವೆ.
[ಆಧಾರ : ಹಿಮ್ಮೇಳ, ಪುಟ 142]

ಮದ್ದಳೆಯ ಪ್ರಮಾಣ ಈಗ ಬಹಳ ಕಡಿಮೆಯಾಗಿದೆ. ಕುಂಡಲಗಳನ್ನು ಇರಿಸುವ ಪರಿಪಾಠ ಈಗ ಇರುವುದಿಲ್ಲ. ಅದು ಬಿಟ್ಟರೆ ಸಭಾಲಕ್ಷಣ ಹೇಳುವ ಉಳಿದೆಲ್ಲಾ ವಿವರ ಗಳನ್ನು ಈಗಲೂ ಮದ್ದಳೆಯಲ್ಲಿ ಕಾಣಬಹುದು. ಮದ್ದಳೆಯ ಕಳಸಿಗೆಗೆ ಹೊನ್ನೆಮರ, ಖದಿರ, ಹಲಸು, ಕಕ್ಕೆ ಮರಗಳು ಬಳಕೆಯಾಗುತ್ತವೆ. ಮದ್ದಳೆಯ ಕಳಸಿಗೆಯನ್ನು ‘ಕುತ್ತಿ’ ಎಂದು ಕರೆಯಲಾಗುತ್ತದೆ. ಸಾಧಾರಣ ಒಂದೂವರೆ ವರ್ಷ ಪ್ರಾಯದ ದನದ ಎಳೆಹೆಣ್ಣು ಗರುವಿನ ಚರ್ಮ ಮುಚ್ಚಿಗೆಗೆ ಬಳಕೆಯಾಗುತ್ತದೆ. ಕಿಟ್ಟ ಕಮ್ಮಾರ ಶಾಲೆಯಲ್ಲಿ ಸಿಗುವ ಕಬ್ಬಿಣದ ಧೂಳು’, ಅನ್ನ ಮತ್ತು ಗುಲಗುಂಜಿ ಅಂಟು ಸೇರಿಸಿ ‘ಕರ್ಣ’ ಹಾಕಲಾಗುತ್ತದೆ. ಈಗ ರಾಕ್‌ ಫಾಸ್ಪೇಟನ್ನು ಕಿಟ್ಟವಾಗಿ ಬಳಸುವುದುಂಟು.’ಕರ್ಣ’ ಮದ್ದಲೆಯ ಮಧ್ಯದ ಕಪ್ಪು ವೃತ್ತಾಕಾರವಾಗಿದ್ದು ಅದು ನಾದ ವೈವಿಧ್ಯಕ್ಕೆ ಕಾರಣವಾಗಿರುತ್ತದೆ. ಮದ್ದಳೆಯ ‘ಬಲ’ದ ನಾದ ಚೆನ್ನಾಗಿ ಬರಬೇಕಾದರೆ ‘ಎಡ’ಕ್ಕೆ ಕರ್ಣದ ಬದಲು ‘ಬೋನ’ ಹಚ್ಚುವುದಿದೆ. ಚೆನ್ನಾಗಿ ಬೆಂದ ಬೆಳ್ತಿಗೆ ಅನ್ನಕ್ಕೆ ಬೂದಿಯನ್ನು ಸೇರಿಸಿ ಮಾಡುವ ಮಿಶ್ರಣವೇ ಬೋನ.

ಮದ್ದಳೆ ವಾದಕನ ಪಾತ್ರ

ಮದ್ದಳೆ ವಾದಕನನ್ನು ಮದ್ಲೆಗಾರ ಎಂದು ಕರೆಯಲಾಗುತ್ತದೆ. ಅನುಭವದ ಆಧಾರ ದಲ್ಲಿ ಹಿರಿಯವನು ಇಡಿ ಮದ್ಲೆಗಾರನಾದರೆ ಕಿರಿಯವನು ಒತ್ತು ಮದ್ಲೆಗಾರನೆನಿಸುತ್ತಾನೆ. ಯಕ್ಷಗಾನದಲ್ಲಿ ಮದ್ದಳೆಗಾರನ ಪಾತ್ರ ಹೀಗಿದೆ :

  • ಮದ್ದಳೆಗಾರ ಹೊರಡಿಸುವ ನಾದದಿಂದ ಭಾಗವತನ ಕಂಠಶ್ರೀ ಸುಶ್ರಾವ್ಯವಾಗುತ್ತದೆ.
  • ಮದ್ದಳೆಗಾರ ಹಾಡಿನ ಲಯವನ್ನು ಸ್ಥರಪಡಿಸಿಕೊಡುತ್ತಾನೆ.
  • ಅವನು ವಿವಿಧ ಗತಿ ಭೇದಗಳಿಂದ ಕುಣಿತಕ್ಕೆ ಸ್ಫೂರ್ತಿ ಪ್ರೇರಣೆ ನೀಡುತ್ತಾನೆ.
  • ಭಾಗವತನ ಯಶಸ್ಸಿಗೆ ಮತ್ತು ಸೋಲಿಗೆ ಮದ್ದಳೆಗಾರ ಕಾರಣನಾಗುತ್ತಾನೆ.
  • ಪಾತ್ರಧಾರಿಯ ಯಶಸ್ಸಿಗೆ ಮದ್ದಳೆಗಾರ ಬಹುಮುಖ್ಯ ಕಾರಣನಾಗಿಬಿಡುತ್ತಾನೆ.
ಬಡಗು ತಿಟ್ಟಿನ ಮದ್ದಳೆ
‘ಮೇಳದಲ್ಲಿ ಭಾಗವತನ ಅನಂತರದ ಸ್ಥಾನ ಮದ್ದಳೆಗಾರನಿಗೆ. ಮೇಳದಲ್ಲಿ ಭಾಗವತ ಬಲು ಮುಖ್ಯ ವ್ಯಕ್ತಿಯಾದರೆ, ಅವನಿಗೆ ಬಲು ಮುಖ್ಯನಾಗುವುದು ಮದ್ದಳೆಗಾರ. ನಿಜಕ್ಕಾದರೆ ಭಾಗವತ ಮತ್ತು ಮದ್ದಳೆಗಾರ ಒಂದೇ ನಾಣ್ಯದ ಎರಡು ಮುಖಗಳು. ಇಬ್ಬರೂ ಒಂದೇ ಯೋಗ್ಯತೆಯವರು. ಮದ್ದಳೆಗಾರನೆಂದರೆ ಉತ್ತಮ ಭಾಗವತನ ಯೋಗ್ಯತೆ ಉಳ್ಳವನೇ. ಭಾಗವತರಿಲ್ಲದಿದ್ದರೆ ಪ್ರಸಂಗದ ನಡೆಯನ್ನು ಹೇಳಿಕೊಡುವ ಯೋಗ್ಯತೆ ಇರುವುದು ಮದ್ದಳೆಗಾರನಿಗೆ. ಭಾಗವತನಂತೆ ಈತನಿಗೂ ಪ್ರಸಂಗಗಳೆಲ್ಲಾ ಕಂಠಸ್ಥ. ರಂಗಕ್ರಿಯೆಯನ್ನು ನಡೆಸುವ ಜವಾಬ್ದಾರಿ ಪೂರ್ತಿ ಮದ್ದಳೆಗಾರನದೇ.’ [ಹಿಮ್ಮೇಳ, ಪುಟ 98]

ಮದ್ದಳೆಗಾರನ ಗುಣ ಲಕ್ಷಣಗಳು

  • ತಾಳ, ಲಯ, ರಸ, ಭಾವ ಜ್ಞಾನ
  • ಸಂಪೂರ್ಣ ರಂಗಮಾಹಿತಿಗಳ ಅರಿವು
  • ಶಾಸ್ತ್ರೀಯ ಸಂಗೀತದ ಜ್ಞಾನ.
  • ಪ್ರಸಂಗಗಳ ಪ್ರಯೋಗ ಜ್ಞಾನ.
  • ಕಲಾವಿದನ ದೈಹಿಕ ಮತ್ತು ಮನೋಸ್ಥತಿಯ ಅರಿವು
  • ಭಾಗವತನನ್ನು ಮತ್ತು ಪಾತ್ರಧಾರಿಗಳನ್ನು ಉತ್ತೇಜಿಸುವ ಗುಣ.
  • ನಿರ್ದೇಶನ ಸಾಮರ್ಥ್ಯ.
ನೆಡ್ಲೆ ನರಸಿಂಹ ಭಟ್ಟ, ಕುದ್ರೆಕೋಡ್ಲು ರಾಮಭಟ್ಟ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್‌, ಗೋಪಾಲ ಕೃಷ್ಣ ಕುರುಪ್‌, ದಿವಾಣ ಭೀಮಭಟ್‌, ಕಾಸರಗೋಡು ವೆಂಕಟ್ರಮಣ, ಪದ್ಯಾಣ ಶಂಕರ ನಾರಾಯಣ ಭಟ್‌ ಜನಾರ್ದನ ಮದ್ಲೆಗಾರ್‌, ಅಡೂರು ಗಣೇಶ ಮುಂತಾದವರು ತೆಂಕುತಿಟ್ಟಿನ ಪ್ರಸಿದ್ಧಿ ಮದ್ದಳೆಗಾರರು. ಹಿರಿಯಡಕ ಗೋಪಾಲರಾವ್‌, ಬಸವ ಗಾಣಿಗ, ದುರ್ಗಪ್ಪ ಗುಡಿಗಾರ್‌, ಮಹಾಬಲ ಕಾರಂತ, ಕರ್ಕಿ ಪ್ರಭಾಕರ ಭಂಡಾರಿ ಮೊದಲಾದವರು ಬಡಗು ತಿಟ್ಟಿನ ಖ್ಯಾತ ಮದ್ದಳೆಗಾರರು.

********************


ಲೇಖನ ಕೃಪೆ : www.chilume.com

ಚಿತ್ರಗಳ ಕೃಪೆ : ಅ೦ತರ್ಜಾಲದಲ್ಲಿ ಯಕ್ಷಗಾನಾಭಿಮಾನಿಗಳಿ೦ದ ಪ್ರಕಟಿಸಲ್ಪಟ್ಟ ಸ೦ಗ್ರಹದಿ೦ದ


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ